ಜಡವಾದ ಮನುಕುಲಕೆ ಚೈತನ್ಯವೀಯುತಿಹ

   ಪರಿಪೂರ್ಣ ಶುದ್ಧಾತ್ಮ ನಿನಗೆ ನಮನ |ಪ|

   ನಿನ್ನೆದೆಯ ಕಾರುಣ್ಯ ನಮ್ಮೆಡೆಗೂ ಹರಿಸಿ

ನೆಮ್ಮದಿಯ ಕೊಡು ನಮಗೆ ಕರುಣಾಳುವೇ

                                    ಕರುಣಾಳುವೇ||ಅಪ||

ಇರುವ ಸುಖ ಅಡವಿಟ್ಟು ಇಲ್ಲದಕೆ ಪಣತೊಟ್ಟು

   ನೆಮ್ಮದಿಯನರಸುತಿಹ ನಮ್ಮ ಕ್ಷಮಿಸು

ನಮ್ಮೆದೆಯನಾಳುತಿಹ ತಳಮಳವ ತೊಲಗಿಸುತ

ಬೆಳಗು ಬಾ ಬದುಕನ್ನು ಮಮತಾಮಯಿ

                                   ಮಮತಾಮಯಿ ||೧||

'ನಾ'ನೆಂಬ ಅಹಮಿಕೆಯು ನಮ್ಮನಾವರಿಸಿಹುದು

'ನೀ' ನೆಂಬ ಮಹಾ ಮಂತ್ರ ಮರೆತೆ ಹೋಗಿಹುದು

ಸ್ವಾರ್ಥ ಮೈದುಂಬಿಹುದು ಪರಹಿತಕೆ ತಾವಿರದು

ಸತ್ಯ ಮೂಕಾಗಿಹುದು ದನಿ ನೀಡು ಬಾ..

                                  ದನಿ ನೀಡು ಬಾ ||೨||

ನಿನಗಿದ್ದರೊಬ್ಬ ಗುರು ನಮಗೀಗ ನೂರಾರು

ನೂರು ಜಾತಿಯು ನೂರು ಮಠಗಳುಂಟು

ಏಕಾತ್ಮ ಶಕ್ತಿಯನು ಬ್ರಹ್ಮ ನಿಷ್ಠತೆಯನ್ನು

ಬಿತ್ತು ಬಾ ಪ್ರತಿ ಎದೆಗು ಆದಿ ಗುರುವೇ

                                  ಆದಿ ಗುರುವೇ ||೩||